
ಕುಂದಾಪುರ: ತಡರಾತ್ರಿ ಕುಂದಾಪುರ ಕಡೆಯಿಂದ ಬೈಂದೂರಿನತ್ತ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರಪಾಲಾದ ಪರಿಣಾಮ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಇನ್ನೋರ್ವ ನಾಪತ್ತೆಯಾಗಿದ್ದು, ಇಬ್ಬರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದ ದಾರುಣ ಘಟನೆ ಇಲ್ಲಿನ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಪ್ರಸಿದ್ದ ಮರವಂತೆ ಬೀಚ್ ನ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ನಡೆದಿದೆ.
ಬೀಜಾಡಿಯ ಗೋಳಿಬೆಟ್ಟು ನಿವಾಸಿ ವಿಲಾಸ್ ಮಾರ್ಬಲ್ ನ ಮಾಲಕ ರಮೇಶ್ ಆಚಾರ್ ನೇರಂಬಳ್ಳಿಯವರ ಪುತ್ರ ವಿರಾಜ್ ಆಚಾರ್ಯ(28) ಸಾವನ್ನಪ್ಪಿದ ದುರ್ದೈವಿ, ಸಹೋದರ ಸಂಬಂಧಿಗಳಾದ ರೋಶನ್, ಸಂದೇಶ್, ಕಾರ್ತಿಕ್ ಪೈಕಿ ರೋಶನ್ ಎಂಬವರು ನಾಪತ್ತೆಯಾಗಿದ್ದು, ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸಂದೇಶ್ ಹಾಗೂ ಕಾರ್ತಿಕ್ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ತಡರಾತ್ರಿ ಸುಮಾರು 1 ಗಂಟೆಯ ವೇಳೆಗೆ ಕುಂದಾಪುರದಿಂದ ಸ್ವಿಫ್ಟ್ ಕಾರಿನಲ್ಲಿ ವಿರಾಜ್ ಹಾಗೂ ಅವರ ಸಹೋದರ ಸಂಬಂಧಿಗಳು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದರು. ವಿರಾಜ್ ಸ್ವತಃ ಕಾರನ್ನು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.
ಮರವಂತೆ ಬೀಚ್ ಬದಿಯ ರಾ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 40 ಅಡಿ ಕೆಳಕ್ಕೆ ಉರುಳಿದೆ. ಸಮುದ್ರದ ತಡೆಗೋಡೆಗಳಿಗೆ ಹಾಕಲಾಗಿದ್ದ ಬಂಡೆಕಲ್ಲುಗಳ ಮೇಲೆ ಉರುಳಿಬಿದ್ದ ಕಾರು ಸಮುದ್ರದ ತಳಭಾಗದ ಬಂಡೆಕಲ್ಲುಗಳ ಬದಿ ಬಂದು ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಸಂದೇಶ್ ಹಾಗೂ ಕಾರ್ತಿಕ್ ಕಾರಿನಿಂದ ಹೊರಕ್ಕೆ ಬಿದ್ದಿದ್ದಾರೆ. ಗಾಯಾಳು ಕಾರ್ತಿಕ್ ಅವರನ್ನು ರಕ್ಷಣೆ ಮಾಡಿ ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ರಕ್ಷಣೆಯ ಪ್ರಯತ್ನ ವಿಫಲ:
ಆಪತ್ಭಾಂಧವ ಇಬ್ರಾಹಿಂ ಮತ್ತವರ ತಂಡ ಸ್ಥಳೀಯರ ಸಹಕಾರವನ್ಮು ಪಡೆದುಕೊಂಡು ಕಾರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದರಾದರೂ ಮಳೆ ಹಾಗೂ ಇತರ ಕಾರಣದಿಂದ ಕೂಡಲೇ ಇದು ಸಾಧ್ಯವಾಗಿರಲಿಲ್ಲ.
ಸ್ಥಳೀಯ ಮುಳುಗುತಜ್ಞ ದಿನೇಶ್ ಗಂಗೊಳ್ಳಿ ಮತ್ತವರ ತಂಡ, ಆಪತ್ಭಾಂದವ ಇಬ್ರಾಹಿಂ ಗಂಗೊಳ್ಳಿ, ನದೀಮ್ ಮತ್ತವರ ತಂಡ ಹಾಗೂ ಸ್ಥಳೀಯರ ನೆರವಿನಿಂದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭಾನುವಾರ ಮುಂಜಾನೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿ ಕಾರನ್ನು ಮೇಲಕ್ಕೆತ್ತಲಾಗಿದೆ. ಈ ವೇಳೆ ಸೀಟ್ ಬೆಲ್ಟ್ ಧರಿಸಿದ್ದ ಸ್ಥಿತಿಯಲ್ಲೇ ವಿರಾಜ್ ಅವರ ಮೃತದೇಹ ಪತ್ತೆಯಾಗಿದೆ. ಕಾರಿನಲ್ಲಿದ್ದ ಇನ್ನೋರ್ವ ರೋಶನ್ ಅವರ ಪತ್ತೆ ಕಾರ್ಯ ಮುಂದುವರೆದಿದ್ದು, ಸಮುದ್ರದಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ್ ಕೆ, ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕುಮಾರ್, ಕುಂದಾಪುರ ಸಂಚಾರಿ ಠಾಣೆಯ ಠಾಣಾಧಿಕಾರಿ ಸುಧಾ ಪ್ರಭು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಓಂಕಾರ್ ಎಸ್ ವಿ ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….