
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮೋದಿ ಯವರ ವಿದ್ಯಾಭ್ಯಾಸದ ಬಗ್ಗೆ ದಾಖಲೆ ಕೇಳಿರುವುದರಿಂದ ಯಾವುದೇ ಲೋಪವಿಲ್ಲ. ಮಾಹಿತಿ ಹಕ್ಕು ಅಧಿನಿಯಮದ ಅನ್ವಯ ಈಗಾಗಲೇ ಲಭ್ಯವಿರುವ ಮಾಹಿತಿಯನ್ನು ಮತ್ತು ದಾಖಲೆಯನ್ನು ಇಂಟರ್ನೆಟ್ ಅಥವಾ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎನ್ನುವುದೇನೋ ಸರಿ. ಅದರಂತೆ ಕಾಯಿದೆಯ ಅಡಿಯಲ್ಲಿ ಬರುವ ಎಲ್ಲಾ ಇಲಾಖೆಗಳು ದಾಖಲೆಗಳು ಮತ್ತು ಮಾಹಿತಿಯನ್ನು ಪ್ರಕಟಿಸಿರುತ್ತವೆ ಎಂದು ತಿಳಿದುಕೊಳ್ಳೋಣ. ಹಾಗೆ ಪ್ರಕಟಿಸಿದ ದಾಖಲೆಗಳು ಮತ್ತು ಮಾಹಿತಿಗಳು ಸತ್ಯವೇ ಅಥವಾ ಅಸತ್ಯವೇ ಎಂದು ತಿಳಿಯಬೇಕಾದರೆ ಕೋರಿಕೆ ದಾರನಿಗೆ ಅಂತಹ ದಾಖಲೆಗಳು ಮತ್ತು ಮಾಹಿತಿಗಳು ಕೋರಿಕೆ ದಾರನ ಕೈಗೆ ದೊರಕಬೇಕು.
ಅದು ಬಿಟ್ಟು ಜಾಲತಾಣದಲ್ಲಿ ಇರುವ ಮಾಹಿತಿ ಮತ್ತು ದಾಖಲೆಗಳನ್ನು ಡೌನ್ಲೋಡ್ ಮಾಡಿ ಪಡೆದರೆ ಅದು ಕನ್ನಡಿಯೊಳಗಿನ ಹಣವಾಗಬಹುದೇ ಹೊರತು, ಉಪಯೋಗಕ್ಕೆ ಬರುವುದು ವಿರಳ. ಮೋದಿಯವರ ವಿದ್ಯಾಭ್ಯಾಸದ ಬಗ್ಗೆ ದಾಖಲೆಯನ್ನು ಒಂದೊಮ್ಮೆ ನೀಡಿದರೆ ಅದರ ನಂತರದಲ್ಲಿ ಮತ್ತಾವ ದಾಖಲೆಗಳನ್ನು ಪಡೆಯಬಹುದು..? ಆ ಮೂಲಕ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಅನುಮಾನವನ್ನು ಹೇಗೆ ನಿವಾರಿಸಬಹುದು ಎನ್ನುವುದಕ್ಕೆ ಒಂದು ಅರ್ಥವಿದೆ. ಇದು ಒಂದು ಕಡೆ ಇರಲಿ. ಮೋದಿಯವರು ತಾವೇ ಹಲವಾರು ಕಡೆ ನನಗೆ ಚಿಕ್ಕಂದಿನಲ್ಲಿ ಬಹಳ ಕಷ್ಟವಿತ್ತು ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ಇರಲಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವು ಸಂದರ್ಭಗಳಲ್ಲಿ ತಾವು ಎರಡೆರಡು ಪದವಿಗಳನ್ನು ಪಡೆದಿರುವುದಾಗಿ ಹೇಳಿಕೊಳ್ಳುತ್ತಾರೆ.
ಮೋದಿಯವರು ತಾವು ಹೇಳಿದಂತೆ ವಿದ್ಯಾಭ್ಯಾಸವನ್ನು ಮಾಡಿದ್ದಾರೆ ಎಂದು ಭಾವಿಸಿಕೊಳ್ಳೋಣ. ಆದರೆ, ಪ್ರತಿಯೊಬ್ಬ ವ್ಯಕ್ತಿ ಕಾಲೇಜ್ ಹಂತದವರೆಗೆ ವಿದ್ಯಾಭ್ಯಾಸ ಮಾಡಿದಾಗ ಹತ್ತಾರು ಜನ ಸ್ನೇಹಿತರು ಸಿಕ್ಕೇ ಸಿಗುತ್ತಾರೆ. ಮೋದಿ ಅವರ ವಿಷಯದಲ್ಲಿ ಅಂತಹ ಸ್ನೇಹಿತರು ಯಾಕಾಗಿ ಇರುವುದಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಸಾರ್ವಜನಿಕರನ್ನು ಕಾಡುತ್ತದೆ. ಮಾಹಿತಿ ಹಕ್ಕು ಅಧಿನಿಯಮದ ಅನ್ವಯ ಈಗಾಗಲೇ ಲಭ್ಯವಿರುವ ದಾಖಲೆಗಳು ಸಾರ್ವಜನಿಕರಿಗೆ ಕೊಡಬಹುದಾದ ದಾಖಲೆಗಳಾಗುತ್ತವೆ. ಇಂಥ ದಾಖಲೆಗಳನ್ನು ವೈಯಕ್ತಿಕ ಎಂದು ಪರಿಗಣಿಸಲು ಯಾವುದೇ ಅರ್ಥವಿಲ್ಲ. ಇಂತಹ ವಿಷಯದಲ್ಲಿ ಹಲವು ರಾಜ್ಯಗಳ ಮಾಹಿತಿ ಆಯೋಗಗಳು ಮಾಹಿತಿ ಕೋರಿಕೆದಾರರ ಪರ ತೀರ್ಪುಗಳನ್ನ ನೀಡಿವೆ. ಸಾರ್ವಜನಿಕ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ ಮತ್ತು ಜನಪ್ರತಿನಿಧಿಯಾಗಿ ಆಯ್ಕೆಯಾದಂತಹ ವ್ಯಕ್ತಿಗಳು ಖಡ್ಡಾಯವಾಗಿ ತಮ್ಮ ವಿದ್ಯಾಭ್ಯಾಸ, ಜಾತಿ ಸೇರಿದಂತೆ ಎಲ್ಲ ಮಾಹಿತಿಯನ್ನು ಚುನಾವಣೆಗೆ ಸ್ಪರ್ಧಿಸುವ ಮೊದಲೇ ಘೋಷಣೆ ಮಾಡಿಕೊಳ್ಳಲೇಬೇಕು. ಹೀಗೆ ಘೋಷಣೆ ಮಾಡಿಕೊಂಡ ಪ್ರಜಾ ಸೇವಕನ ಬಗ್ಗೆ ಪ್ರಜೆಗಳು ಸತ್ಯ ತಿಳಿದುಕೊಳ್ಳುವ ಎಲ್ಲಾ ಹಕ್ಕನ್ನು ಹೊಂದಿರುತ್ತಾರೆ. ಕೇವಲ ಘೋಷಣೆ ಮಾಡಿಕೊಂಡ ತಕ್ಷಣ ಅದು ಸಂಪೂರ್ಣ ಸತ್ಯವಿರುವೆಂದೆಂದು ಭಾವಿಸುವುದು ಮೂರ್ಖತನವಾದೀತು. ಈ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಮತ್ತು ದಾಖಲೆಗಳನ್ನು ಕೇಳಿದರೆ ಕೊಡುವುದಕ್ಕೆ ಏಕೆ ಹೊಟ್ಟೆ ನೋವು ಬರುತ್ತದೆ ಎನ್ನುವುದು ಬಲವಾದ ಯಕ್ಷಪ್ರಶ್ನೆ. ಸರ್ಕಾರ ಅಥವಾ ಸರ್ಕಾರದಿಂದ ಧನ ಸಹಾಯ ಪಡೆದ ಯಾವುದೇ ಸಂಸ್ಥೆ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಬರುವುದರಿಂದ ಈಗಾಗಲೇ ಕಡ್ಡಾಯವಾಗಿ ನಿರ್ವಹಿಸಲಾದ ಮಾಹಿತಿ ಮತ್ತು ದಾಖಲೆಗಳನ್ನು ಕೊಡುವುದು ಕಾಯ್ದೆಯ ಮೂಲ ಉದ್ದೇಶವಾಗಿದೆ. ಕೆಲವು ಸಂದರ್ಭಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಕೊಡಬೇಕಾಗುತ್ತದೆ. ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿ ಕೊಡಬೇಕಾದ ಸಂದರ್ಭಗಳಲ್ಲಿಯೇ ಕೋರಿಕೆದಾರರ ಮತ್ತು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳು. ಮಾಹಿತಿ ಆಯೋಗ ಆಯೋಗದ ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ ತಲೆದೂರುತ್ತದೆ.
ಅರವಿಂದ್ ಕೇಜ್ರಿವಾಲ್ ಪ್ರಕರಣದಿಂದ ಒಂದಂತೂ ಸ್ಪಷ್ಟವಾಗುತ್ತದೆ. ಅದು ಏನೆಂದರೆ ಅಂದಿನ ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಅಧಿನಿಯಮ ರೂಪಿಸುವಾಗ ಮತ್ತು ಜಾರಿಗೆ ತಂದಾಗ ಪ್ರಬಲವಾದ ಬ್ರಹ್ಮಾಸ್ತ್ರವೆಂದೆ ಭಾವಿಸಲಾಗಿತ್ತು ಹಾಗೆ ಕಂಡು ಬಂದಿತ್ತು. ಮತ್ತು ಜಾರಿಗೆ ತಂದ ಸರ್ಕಾರದ ಉದ್ದೇಶವೂ ಕೂಡ ಇದು ಬ್ರಹ್ಮಾಸ್ತ್ರವಾಗಲೇ ಬೇಕೆಂದಾಗಿತ್ತು. ಮಾಹಿತಿ ಹಕ್ಕು ಅಧಿನಿಯಮ 2005 ರಲ್ಲಿ ಜಾರಿಗೆ ಬಂದು 18 ವರ್ಷಗಳು ಕಳೆಯುತ್ತಾ ಬಂದರು ಅದರ ಮೂಲ ಉದ್ದೇಶಗಳು ಕಾರ್ಯಗತ ಮಾಡುವುದರಿಂದ ಬುಡಮೇಲು ಆಗುತ್ತಿವೆ. ಸಮರ್ಪಕವಾಗಿ ಜಾರಿಗೆ ತರಬೇಕಾದವರು ರಂಗೋಲಿ ಕೆಳಗೆ ನುಸುಳುತ್ತಿರುವುದರಿಂದ ಮಾಹಿತಿ ಹಕ್ಕು ಅಧಿನಿಯಮ ಮತ್ತಷ್ಟು ಬಲಗೊಳಿಸಬೇಕು. ಅದಕ್ಕಾಗಿ ತಿದ್ದುಪಡಿ ಮಾಡುವ ಅಗತ್ಯತೆ ಕಂಡು ಬರುತ್ತಿದೆ. ಇಲ್ಲದೆ ಹೋದರೆ ಕಲ್ಲಂಗಡಿ ಹೊಲದಲ್ಲಿ ಕುಳಿತ ಕಾಲಿಲ್ಲದವನು ಕಲ್ಲಂಗಡಿ ಕೀಳಲು ಬರುವವರಿಗೆ ನಿಮ್ಮ ಕಾಲು ಮುರಿಯುತ್ತೇನೆ ಎಂದು ಹೇಳಿದಂತೆ ಆಗುತ್ತದೆ.ಅಂದೆನಿಸುತ್ತದೆ ಎಂದು ಶಿವಮೊಗ್ಗ ದ ವಕೀಲರಾದ ವೈ.ಬಿ. ಚಂದ್ರಕಾಂತ್ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ….
ರಘುರಾಜ್ ಹೆಚ್.ಕೆ…9449553305…